ಫ್ರಾಂಕ್‍ಫರ್ಟ್ 3 

ಅಮೆರಿಕ ಸಂಯುಕ್ತ ಸಂಸ್ಥಾನದ ಕೆಂಟುಕಿ ರಾಜ್ಯದ ಆಡಳಿತ ಕೇಂದ್ರ. ಫ್ರಾಂಕಲಿನ್ ಜಿಲ್ಲೆಯ ಮುಖ್ಯ ನಗರ. ಲೂಯೀವಿಲ್ ನಗರಕ್ಕೆ ಪೂರ್ವದಲ್ಲಿ 72 ಕಿಮೀ. ದೂರದಲ್ಲಿ ಕೆಂಟುಕಿ ನದಿ ದಡದಲ್ಲಿರುವ ಈ ನಗರದ ಸುತ್ತಲೂ ಹಸಿರು ಮೈದಾನ ಮತ್ತು ಬೆಟ್ಟಗಳಿದ್ದು ಈ ನಗರವನ್ನು ಬ್ಲೂಗ್ರಾಸ್ ಕ್ಯಾಪಿಟಲ್ ಎಂದೂ ಕರೆಯುತ್ತಾರೆ. ಜನಸಂಖೈ 21, 902 (1970).

	ಜನರಲ್ ಜೇಮ್ಸ ವಿಲ್ಕ್‍ನ್‍ಸನ್ 1786ರಲ್ಲಿ ಸ್ಥಾಪಿಸಿದ ಈ ನಗರ 1792ರಿಂದ ಕೆಂಟುಕಿ ರಾಜ್ಯದ ಆಡಳಿತಕೇಂದ್ರವಾಗಿವೆ. ನಗರ ಎರಡು ಸಾರಿ ಬೆಂಕಿಗೂ 1937ರಲ್ಲಿ ಓಹಿಯೋ ನದಿಯ ಪ್ರವಾಹಕ್ಕೂ ಗುರಿಯಾಗಿ ನಷ್ಟ ಅನುಭವಿಸಿತು. ರಾಜ್ಯಾಡಳಿತ ಭವನವನ್ನು 1905-09ರ ಅವಧಿಯಲ್ಲಿ 20 ಲಕ್ಷ ಡಾಲರುಗಳ ವೆಚ್ಚದಲ್ಲಿ ಕಟ್ಟಿಸಲಾಯಿತು. ಇದೊಂದು ಪ್ರಮುಖ ವ್ಯಾಪಾರ ಕ್ರೇಂದ್ರ. ಹೊಗೆಸೊಪ್ಪು, ಒಳ್ಳೆತಳಿಯ ಕುದುರೆಗಳಿಗೆ ಪ್ರಸಿದ್ಧ. ವಿಸ್ಕಿ, ಕ್ಯಾಂಡಿ, ಮರದ ಸಾಮಾನುಗಳು ವಿದ್ಯುತ್ ಮತ್ತು ಲೋಹ ವಸ್ತುಗಳು, ನೇಯ್ಗೆ ಬಟ್ಟೆ ಮುಂತಾದವನ್ನು ತಯಾರಿಸುತ್ತಾರೆ. ಕೆಂಟುಕಿ ರಾಜ್ಯ ಕಾಲೇಜು, ಕೆಲವು ಚರಿತ್ರಾರ್ಹ ಕಟ್ಟಡಗಳೂ ಇವೆ.								*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ